ಬ್ರ್ಯಾಂಡ್ಟ್, ಜಾರ್ಜ್
1694-1768. ಸ್ವೀಡನ್ ರಸಾಯನವಿಜ್ಞಾನಿ. ಜನನ 21-7-1694, ಮರಣ 29-4-1768. ಈತನ ತಂದೆಯ ಪ್ರಧಾನ ವೃತ್ತಿ ಔಷಧ ವ್ಯಾಪಾರವಾಗಿದ್ದರೂ ಅವನು ಲೋಹ ಸಂಸ್ಕರಣೆಯಲ್ಲಿ ಕೂಡ ನಿರತನಾಗಿದ್ದ. ಸಹಜವಾಗಿಯೆ ಮಗನಿಗೆ ಈ ಎರಡು ಕ್ಷೇತ್ರಗಳಲ್ಲೂ ಅಭಿರುಚಿ ಉಂಟಾಯಿತು. 1726ರಲ್ಲಿ ವೈದ್ಯಕೀಯ ಪದವೀಧರನಾದರೂ ವೃತ್ತಿನಿರತ ವೈದ್ಯನಾಗಲಿಲ್ಲ. ಲೋಹವಿದ್ಯೆಯಲ್ಲಿ ಈತನಿಗಿದ್ದ ಅಪಾರ ಅನುಭವದ ಆಧಾರದ ಮೇಲೆ ಈತನಿಗೆ ಸ್ಟಾಕ್‍ಹೋಮಿನ ಗಣಿ ಇಲಾಖೆಯನ್ನು ವಹಿಸಿಕೊಡಲಾಯಿತು. ಮೂರು ವರ್ಷಗಳ ತರುವಾಯ ಟಂಕಸಾಲೆಯಲ್ಲಿ ಲೋಹ ವಿಶ್ಲೇಷಕನಾಗಿ ನೇಮಕಗೊಂಡ.

	ಆರ್ಸೆನಿಕ್ ಧಾತುವನ್ನು ಕುರಿತು ಬ್ರ್ಯಾಂಡ್ಟ್ ಅನೇಕ ಪ್ರಯೋಗ ನಡೆಸಿದ್ದಾನೆ. ಅದರೆ ಅವನ ಪ್ರಸಿದ್ಧಿಗೆ ಕಾರಣವಾದ ಸಂಶೋಧನೆಯೇ ಬೇರೆ. ಗುಣಗಳಲ್ಲಿ ತಾಮ್ರದ ಅದುರನ್ನು ಹೋಲುವ, ಆದರೆ ಸಂಸ್ಕರಿಸಿದಾಗ ತಾಮ್ರವನ್ನು ನೀಡದ ಒಂದು ಖನಿಜ ಪ್ರಕೃತಿಯಲ್ಲಿ ದೊರೆಯುತ್ತದೆ. ಶತಮಾನಗಳ ಕಾಲ ಅದರಿಂದ ನೀಲಿ ರಂಗನ್ನು ತಯಾರಿಸುವುದು ವಾಡಿಕೆಯಾಗಿತ್ತು. ಜರ್ಮನ್ ಗಣಿ ಉದ್ಯಮಿಗಳಾದರೂ ಅದು ತಾಮ್ರದ ಖನಿಜವೇ ಸರಿ, ಅದಕ್ಕೆ ಕೋಬೋಲ್ಡ್ ಭೂತ ಮೆಟ್ಟಕೊಂಡಿದೆ. ಆದ್ದರಿಂದ ಅದು ತಾಮ್ರವನ್ನು ಬಿಟ್ಟುಕೊಡದು ಎಂದು ನಂಬಿದ್ದರು. ಬ್ರಾಂಡ್ಟ್‍ನ ವೈಜ್ಞಾನಿಕ ಮನೋಧರ್ಮಕ್ಕೆ ಈ ಮೂಢನಂಬಿಕೆ ಸವಾಲಾಯಿತು. ಅವನು ಆ ದಟ್ಟ ನೀಲಿ ಖನಿಜವನ್ನು ವಿಶಿಷ್ಟ ರೀತಿಯಲ್ಲಿ ಸಂಸ್ಕರಿಸಿದ. ಹೊಸ ಲೋಹವೊಂದು ದೊರೆಯಿತು. ಅದು ತಾಮ್ರವಾಗಿರದೆ ಕಬ್ಬಿಣವನ್ನು ಹೆಚ್ಚು ಹೋಲುತ್ತಿತ್ತು. ಆಗ ಖನಿಜವನ್ನು ಕೋಬಾಲ್ಟ್ ಎಂದು ಕರೆಯತ್ತಿದುದರಿಂದ ನೂತನ ಲೋಹಕ್ಕೆ ಕೋಬಾಲ್ಟ್ ಎಂದೇ ಹೆಸರಿಟ್ಟ. ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ ಬ್ರ್ಯಾಂಡ್ ಎಂಬ ಜರ್ಮನ್ ರಸಾಯನವಿಜ್ಞಾನಿ ರಂಜಕವನ್ನು ಶೋಧಿಸಿದ್ದ. ಅಲ್ಲಿಂದೀಚೆಗೆ ಪತ್ತೆಯಾದ ಏಕೈಕ ಧಾತುವೆಂದರೆ ಕೋಬಾಲ್ಟ್. ಇದರಿಂದ ಮುಂದೆ ಹೊಸ ಧಾತುಗಳ ಶೋಧಕ್ಕೆ ಉತ್ತೇಜನ ಸಿಕ್ಕಿತು.

	ಇವನ ಪೂರ್ವಿಕರಾದ ಬ್ರ್ಯಾಂಡ್, ಬೆಕರ್, ಸ್ಟಾಲ್, ಬಾಯ್ಲ್ ಮುಂತಾದ ಘಟಾನುಘಟಿಗಳೆಲ್ಲರೂ ರಸವಾದದ ಪ್ರಭಾವಕ್ಕೆ ಒಳಗಾಗಿದ್ದರು. ಆದರೆ ಬ್ರ್ಯಾಂಡ್ಟ್ ಮಾತ್ರ ಅದರಿಂದ ಸಂಪೂರ್ಣವಾಗಿ ಮುಕ್ತನಾಗಿದ್ದ. ಇದು ಅವನ ವೈಶಿಷ್ಟ್ಯ. ವಾಸ್ತವವಾಗಿ ಅದರ ವಿರುದ್ಧ ಹೋರಾಡುವುದೇ ಅವನ ಹವ್ಯಾಸವಾಗಿತ್ತು. ಉದಾಹರಣೆಗೆ ಚಿನ್ನವನ್ನು ಬಿಸಿಯಾದ ನೈಟ್ರಿಕ್ ಆಮ್ಲದಲ್ಲಿ ವಿಲೀನ ಮಾಡಬಹುದು. ದ್ರಾವಣವನ್ನು ತಣಿಸಿ ಕುಲುಕಿದರೆ ಚಿನ್ನ ಪುನರಾವರಿಸುತ್ತದೆ. ಹಾಗೆಂದ ಮಾತ್ರಕ್ಕೆ ಇಲ್ಲದ ಬಂಗಾರ ಹುಟ್ಟಿತೆ? ಇದು ಪವಾಡವೆನ್ನುವವರು ಶುದ್ಧ ಮೂರ್ಖರು ಎಂದು ಬ್ರ್ಯಾಂಡ್ಟ್ ಗೇಲಿ ಮಾಡುತ್ತಿದ್ದನಂತೆ.

	ಅವನು ಕಾಲವಾಗುವ ಹೊತ್ತಿಗೆ ರಸವಾದದ ಅವಸಾನವೂ ಸನ್ನಿಹಿತವಾಗಿತ್ತು. ರಸಾಯನವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಪ್ರಗತಿಯಾಗಿತ್ತು. ಅದರೆ ಅದನ್ನು ಕಂಡು ಆನಂದಿಸಲು ಬ್ರ್ಯಾಂಡ್ಟ್ ಬದುಕಿರಲಿಲ್ಲ. 				(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ